Thursday, 28 October 2021

ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ

ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ

ಪೀಠಿಕೆ 

ಮೈಸೂರು ರಾಜ್ಯವನ್ನು (ಇಂದಿನ ಕರ್ಣಾಟಕ) ಆಳಿದ ದೊರೆಗಳಲ್ಲಿ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಬಹದ್ದೂರ್ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರರ ಕೊಡುಗೆ ವಿಶಿಷ್ಟವಾದದ್ದು. ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಮೊದಲಾದವುಗಳಿಗೆ ಈ ಇಬ್ಬರು ಮಹಾರಾಜರ ಕೊಡುಗೆ ಅಪಾರ. ಮುಮ್ಮಡಿ ಕೃಷ್ಣರಾಜರು ಕಲಾಪೋಷಕರೂ ಸ್ವಯಂ ಕವಿಗಳೂ ಆಗಿದ್ದರು. ಅವರು ರಚಿಸಿರುವ  ಶಾಕುಂತಲ ನವೀನಟೀಕೆ, ಕೃಷ್ಣರಾಜವಾಣೀವಿಲಾಸ ಮಹಾಭಾರತ ಕನ್ನಡ ಟೀಕು, ಕೃಷ್ಣರಾಜವಾಣೀವಿಲಾಸ ಭಾಗವತ ಕನ್ನಡ ಟೀಕು, ಚಾಮರಾಜೋಕ್ತಿವಿಲಾಸ ರಾಮಾಯಣ ಕನ್ನಡ ಟೀಕು, ಶ್ರೀತತ್ತ್ವನಿಧಿ, ದೇವತಾ ಧ್ಯಾನಮಾಲಿಕಾ, ಚಾಮುಂಡಿಕಾ ಲಘುನಿಘಂಟು, ಕನ್ನಡ ಪಂಚತಂತ್ರ ಇವೇ ಮೊದಲಾದ ಗ್ರಂಥಗಳಿಂದ ಅವರ ಸಾಹಿತ್ಯ ಕೊಡುಗೆಯು ನಮಗೆ ತಿಳಿಯುತ್ತದೆ. ರಾಮಾಯಣ ಮಹಾಭಾರತ ಭಾಗವತಗಳು ಅರಮನೆಯ ಜಗನ್ಮೋಹನ ಮುದ್ರಾಕ್ಷರಶಾಲೆಯಲ್ಲೂ, ರುದ್ರಪ್ಪನವರ ಚಾಮುಂಡೇಶ್ವರಿ ಮುದ್ರಣಾಲಯದಲ್ಲೂ(ಲಾಲ್ಬಾಗ್) ಮುದ್ರಿತವಾಯಿತು(around 1890s). ಅದೇ ಕಾಲದಲ್ಲಿ ಮಹಾಭಾರತವು ಮರುಮುದ್ರಣವನ್ನೂ ಕಂಡಿತು. ಅನೇಕ ಶಾಲೆಗಳಿಗೆ ಈ ಪುಸ್ತಕಗಳನ್ನು ಹಂಚಲಾಯಿತು. ಶ್ರೀಮಾನ್ ಡಿ ವಿ ಗುಂಡಪ್ಪನವರ ಪ್ರಯತ್ನದಿಂದ ಚಾಮರಾಜೋಕ್ತಿ ವಿಲಾಸ ಕನ್ನಡ ರಾಮಾಯಣವು ವಿದ್ವಾನ್ ಎನ್ ರಂಗನಾಥಶರ್ಮರ ಸಂಪಾದಕತ್ವದಲ್ಲಿ ೧೯೬೭ ರಲ್ಲಿ ಹೊರಬಿದ್ದಿತು. (ಇದರ ಮರುಮುದ್ರಣ ೨೦೧೮ ರಲ್ಲಿ ಸ್ವದೇಶಿ ಪ್ರತಿಷ್ಠಾನದಿಂದ ಆಗಿದೆ). ಭಾರತ ಭಾಗವತಗಳು ಈಗ ಲಭ್ಯವಿಲ್ಲ. 

(ಚಾಮರಾಜೋಕ್ತಿ ವಿಲಾಸ ಕನ್ನಡ ರಾಮಾಯಣದ ಮುಖಪುಟ)


ಮುಮ್ಮಡಿಯವರು ಅನೇಕ  ವಿದ್ವಾಂಸರನ್ನೂ ಆಸ್ಥಾನಪಂಡಿತರನ್ನಾಗಿ ನೇಮಿಸಿದ್ದರು. ಮೈಸೂರು ಸದಾಶಿವರಾಯರು (ಸಂಗೀತ), ಕುಣಿಗಲ್ ರಾಮಾಶಾಸ್ತ್ರಿಗಳು (ತರ್ಕ, ವೆದಾಂತ ಮತ್ತು ಸಾಹಿತ್ಯ ಪಂಡಿತರು. ಇವರು ಶೃಂಗೇರಿ ೩೩ನೆಯ ಜಗದ್ಗುರುಗಳಾದ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತಿಗಳವರ ಪೂರ್ವಾಶ್ರಮದ ತಂದೆಯವರು) , ಸೋಸಲೆ ಗರಳಪುರೀಶಾಸ್ತ್ರಿ (ಸಾಹಿತ್ಯ ಮತ್ತು ಅಲಂಕಾರ ವಿದ್ವಾಂಸರು) ಇವರೇ ಮೊದಲಾದ ಅನೇಕ ವಿದ್ವಾಂಸರು ಮುಮ್ಮಡಿಯವರ ಆಸ್ಥಾನದ ಪಂಡಿತರಾಗಿದ್ದರು. 

ಶ್ರೀತತ್ತ್ವನಿಧಿ, ದೇವತಾ ಧ್ಯಾನಮಾಲಿಕಾ ಮೊದಲಾದ ಗ್ರಂಥಗಳಲ್ಲಿ ಅವರು ಅನೇಕ ಗ್ರಂಥಗಳಿಂದ ವಿಷಯಗಳನ್ನು ಆಯ್ದು ತಾವೇ  ದೇವತೆಗಳ ಧ್ಯಾನ ಶ್ಲೋಕಗಳನ್ನು ರಚಿಸಿದ್ದಾರೆ. ಆಸ್ಥಾನಪಂಡಿತರಿಂದ ಅವುಗಳಿಗೆ ಚಿತ್ರಗಳನ್ನೂ ಬರೆಸಿದ್ದಾರೆ. ಇದು ವಿಶ್ವಕೋಶದಂತಿದೆ. ಶ್ರೀತತ್ತ್ವ ನಿಧಿಯು ಪ್ರಸ್ತುತ ಮೈಸೂರಿನ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಿಂದ ಪ್ರಕಟವಾಗುತ್ತಿದೆ. 

(ಮುಮ್ಮಡಿಯವರ ದೇವತಾ ಧ್ಯಾನ ಮಾಲಿಕೆಯಿಂದ, ಸಂಪಾದಕರು : ಸಾ ಕೃ ರಾಮಚಂದ್ರರಾಯರು)


ಮುಮ್ಮಡಿಯವರ ನಂತರ ಇಷ್ಟು ವ್ಯಾಪಕವಾದ ಸಾಹಿತ್ಯ ಸೇವೆಯನ್ನು ಸಲ್ಲಿಸಿರುವವರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರು. 


 ಶ್ರೀ ಜಯಚಾಮರಾಜೇಂದ್ರ ಒಡೆಯರ್ ಮಹಾಪ್ರಭುಗಳ ಸಾಹಿತ್ಯ ಸೇವೆ 

ಜಯಚಾಮರಾಜೇಂದ್ರರು ಪಟ್ಟಕ್ಕೆ ಬಂದಕೂಡಲೆ ವಾಸುದೇವಾಚಾರ್ಯರಿಂದ ಸಂಗೀತವನ್ನು ಕಲಿತರು. ಶ್ರೀವಿದ್ಯಾ ಅಂಕಿತದಿಂದ ೯೪ ರಚನೆಗಳನ್ನು ರಚಿಸಿರುವರು.  ಶ್ರೀವಿದ್ಯಾ ದೀಕ್ಷೆಯನ್ನು ಪಡೆದ ರಾಜರುಗಳಲ್ಲಿ ಇವರು ಪ್ರಸಿದ್ಧರು. ಇವರ ಗುರುಗಳು ನಾಗಲಿಂಗ ಪರಿವ್ರಾಜಕಾಚಾರ್ಯ ಶಿಲ್ಪಸಿದ್ಧಾಂತ ಸುಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಸಿದ್ಧಲಿಂಗಸ್ವಾಮಿಗಳು. ಜಯಚಾಮರಾಜರ ದೀಕ್ಷಾನಾಮ "ಚಿತ್ಪ್ರಭಾನಂದ" ರಾಜಯೋಗೀಂದ್ರ ಎಂದು. ಮಹಾರಾಜರ ಸಂಗೀತರಚನೆಗಳನ್ನು ಮೈಸೂರು ವಾಸುದೇವಾಚಾರ್ಯರ ಮೊಮ್ಮಕ್ಕಳಾದ ಎಸ್.ಕೃಷ್ಣಮೂರ್ತಿಗಳು ೨೦೧೦ ರಲ್ಲಿ ಪ್ರಕಟಿಸಿರುವರು. 

( ಶ್ರೀವಿದ್ಯಾ ಗಾನವಾರಿಧಿ - ಮಹಾರಾಜರ ೯೪ ಸಂಗೀತ ರಚನೆಗಳ ಸಂಗ್ರಹದ ಮುಖಪುಟ)

ಮಹಾರಾಜರು ಪಶ್ಚಾತ್ಯ ಸಂಗೀತದಲ್ಲೂ ಮಹಾವಿದ್ವಾಂಸರಾಗಿದ್ದರು. ತಾವೇ ಸ್ವತಃ ಪಿಯಾನೋ ನುಡಿಸುತ್ತಿದ್ದರು.  Dattatreya The Way And The Goal ಮೊದಲಾದ ಪುಸ್ತಕಗಳನ್ನು ಪ್ರಭುಗಳೇ ರಚಿಸಿರುವರು. ದತ್ತಾತ್ರೇಯ ಪುಸ್ತಕ ಕನ್ನಡಕ್ಕೂ ಅನುವಾದವಾಗಿದೆ. ಇದರಲ್ಲಿ ಜೀವನ್ಮುಕ್ತಿ ಗೀತೆ ಮತ್ತು ಅವಧೂತಗೀತೆಗಳ ವ್ಯಾಖ್ಯಾನವುಂಟು. ಮಹಾಪ್ರಭುಗಳು ವೇದಾಂತವನ್ನೂ ತಿಳಿದಿದ್ದರು. ಹೊಳೆನರಸೀಪುರದ ಸಚ್ಚಿದಾನಂದೇಂದ್ರ ಸ್ವಾಮಿಗಳಿಂದ ಅನುವಾದಿತವಾದ ಶಂಕರರ ಸಮಗ್ರಕೃತಿಗಳು ಜಯಚಾಮರಾಜೇಂದ್ರ ಗ್ರಂಥರತ್ನಮಾಲೆಯ ಮೂಲಕ ಹೊರಬಂದಿತು. ೨೫ಕ್ಕೂ ಹೆಚ್ಚು ಪುರಾಣಗಳನ್ನು ಮಹಾಪ್ರಭುಗಳು ಕನ್ನಡದಲ್ಲಿ ವಿದ್ವಾಂಸರಿಂದ ಅನುವಾದ ಮಾಡಿಸಿ ಕನ್ನಡ ಜನತೆ ಓದಲು ಮಹದುಪಕಾರ ಮಾಡಿದ್ದಾರೆ. ಗ್ರಂಥರತ್ನಮಾಲಿಕೆಯಲ್ಲಿ ಪ್ರಕಟವಾದ ಪುರಾಣಗಳಲ್ಲಿ ಕೆಲವನ್ನು ಹೆಸರಿಸಬಹುದೆಂದರೆ

೧. ಗಣೇಶ ಪುರಾಣ, ಅನು: ಹಾನಗಲ್ ಯಜ್ಞೇಶ್ವರ ಶಾಸ್ತ್ರಿ (೮ ಸಂಪುಟಗಳು)

೨. ಶ್ರೀಮದ್ದೇವೀಭಾಗವತಂ ಮಹಾಪುರಾಣಂ (೧೧ ಸಂಪುಟಗಳು), ಲಿಂಗ ಪುರಾಣ, ತ್ರಿಪುರಾ ರಹಸ್ಯ, ಆದಿಪುರಾಣ, ದೇವೀ ಮಹಾತ್ಮೆ, ಶ್ರೀವಿದ್ಯಾ ಮಂತ್ರ ಭಾಷ್ಯ, ದೇವೀ ಉಪನಿಷತ್ತುಗಳು. ಅನು ಎಡತೊರೆ ಚಂದ್ರಶೇಖರ ಶಾಸ್ತ್ರಿ 

೩. ಲಲಿತೋಪಾಖ್ಯಾನ ಮತ್ತು ಸ್ಕಾಂದಪುರಾಣ ಅನು: ಎಮ್. ಸುಬ್ರಹ್ಮಣ್ಯ ಶಾಸ್ತ್ರಿಗಳು

೪. ಗಾರ್ಗ್ಯ ಸಂಹಿತಾ, ಶಿವ ಪುರಾಣ, ಕಾಳಿಕಾ ಪುರಾಣ ಅನು: ಹಾಸನದ ಪಂಡಿತ ವೆಂಕಟರಾವ್

೫. ಶಿವರಹಸ್ಯ ಅನು: ಗಂಗಾಧರ ಶಾಸ್ತ್ರೀ (೩೦ ಸಂಪುಟಗಳು)

೬. ಯೋಗವಾಸಿಷ್ಠ ಅನು:ದೇವುಡು ನರಸಿಂಹ ಶಾಸ್ತ್ರೀ ಮತ್ತು ಮಣಿಕುಂಡಲಂ ಎಸ್ ವೆಂಕಟೇಶ ಶಾಸ್ತ್ರೀ 

೭. ಶಿವತತ್ತ್ವ ರಹಸ್ಯ , ಹಾಲಾಸ್ಯ ಮಾಹಾತ್ಮ್ಯಮ್ ಅನು: ಸೀತಾರಾಮಶಾಸ್ತ್ರೀ

೮. ಆನಂದ ರಾಮಾಯಣ, ಅದ್ಭುತ ರಾಮಾಯಣ, ಅಧ್ಯಾತ್ಮ ರಾಮಾಯಣ ಅನು: ಬಿ. ಸೂರ್ಯನಾರಾಯಣ

ಇವೇ ಮೊದಲಾದ ಅನೇಕ ಪುರಾಣ ಗ್ರಂಥಗಳು ಮಹಾರಾಜರು ಅರಮನೆಯಿಂದ ಪ್ರಕಟಿಸಿದರು. ಶ್ರೀವಿದ್ಯೆಗೆ ಸಂಬಂಧಪಟ್ಟ ಲಲಿತಾ ತ್ರಿಶತೀ ಭಾಷ್ಯ, ತ್ರಿಪುರಾ ರಹಸ್ಯ, ನ್ಯಾಸಮಂಜರೀ, ಷೋಡಶೀ ಪೂಜಾ ವಿಧಾನ ಇವೇ ಮೊದಲಾದ ಗ್ರಂಥಗಳನ್ನು ಪ್ರಕಟಿಸಿದರು. ವೈದಿಕ ಗ್ರಂಥ ಮಾಲೆಯಲ್ಲಿ ಮಹಾನ್ಯಾಸ ಪ್ರಯೋಗವೇ ಮೊದಲಾದ ಪುಸ್ತಕಗಳನ್ನೂ ಪ್ರಕಟಿಸಿದರು. ಅಲ್ಲದೆ ಡಾ. ವಿ. ರಾಘವನ್ ಅವರ ಶೃಂಗಾರ ಪ್ರಕಾಶ ಪುಸ್ತಕಕ್ಕೂ ಮಹಾರಾಜರೇ ಧನಸಹಾಯವನ್ನು ಮಾಡಿದ್ದರು.

(ಗಣೇಶ ಪುರಾಣದ ಮುಖಪುಟ)


ಋಗ್ವೇದ ಸಂಹಿತೆಯ ಪ್ರಕಾಶನ


ಭಾರತೀಯ ಸಂಸ್ಕೃತಿಗೆ ವೇದಗಳೇ ಆಧಾರ. ಅವು ಭಗವಂತನಿಂದ ಬಂದದ್ದು. ವೇದಗಳಿಗೆ ಸಾಯಣರೇ ಮೊದಲಾದವರು ಭಾಷ್ಯಗಳನ್ನು ಬರೆದಿದ್ದಾರೆ. ಸಾಯಣರ 'ವೇದಾರ್ಥಪ್ರಕಾಶ'ದ ಕನ್ನಡಾನುವಾದವು ೧೯೪೭ರ ಹೊತ್ತಿಗೆ ಆಗಿರಲಿಲ್ಲ. ಇದರ ಅಭಾವವನ್ನು ಮನಗಂಡ ಶ್ರೀ ಶಿಲ್ಪಸಿದ್ಧಾಂತಿ ಶಿವಯೋಗಿ ಶ್ರೀ ಸಿದ್ಧಲಿಂಗ ಸ್ವಾಮಿಗಳು ಮಹಾಪ್ರಭುಗಳವರ ಗಮನಕ್ಕೆ ಅನುವಾದದ ವಿಚಾರವನ್ನು ಪ್ರಸ್ತಾಪಿಸಿದರು. ಅಧ್ಯಾತ್ಮವಿದ್ಯಾಸಕ್ತರೂ, ರಾಜರ್ಷಿಪುಂಗವರೂ, ಶ್ರೀವಿದ್ಯಾ ಚಿತ್ಪ್ರಭಾನಂದರಾಜಯೋಗೀಂದ್ರ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ "ವೇದವಿಮರ್ಶನ ವಿದ್ವನ್ಮಂಡಲಿ"ಯನ್ನು ಸ್ಥಾಪಿಸಿದರು. ವೇದಗಳ ಅನುವಾದವು  ಮಹಾರಾಜರ ಉದಾರಾಶ್ರಯದಲ್ಲಿ ಪ್ರಕಟವಾಯಿತು.
(ಶಿಲ್ಪ ಸಿದ್ಧಾಂತಿ ಸಿದ್ಧಲಿಂಗಸ್ವಾಲಿಗಳು)

 ಹಾಸನದ ಪಂಡಿತ ವೆಂಕಟರಾಯರು ಅನುವಾದ ಕಾರ್ಯವನ್ನು ಪ್ರಾರಂಭಿಸಿದರು. ಆಸ್ಥಾನ ವಿದ್ವಾನ್ ಲಕ್ಷ್ಮಣಾಚಾರ್ಯ, ಸೀತಾರಾಮಶಾಸ್ತ್ರಿ, ಗಂಗಾಧರಶಾಸ್ತ್ರಿ, ವಿಷ್ಣುಮೂರ್ತಿ ಭಟ್ಟ ಮೊದಲಾದ ಪಂಡಿತರು ಈ ಮಂಡಲಿಯಲ್ಲಿ ಕೆಲಸಮಾಡಿದರು. ವೇದಪುರುಷನ ಅನುಗ್ರಹದಿಂದ ೧೯೪೮ ರಲ್ಲಿ ಇದರ ಮೊದಲ ಸಂಪುಟ ಹೊರಬಂದಿತು. 
(ಋಗ್ವೇದದ ಮುಖಪುಟ)


೧೯೬೨ ರಲ್ಲಿ ಅನುವಾದವು ಸಂಪನ್ನವಾಯಿತು. ೧೯೪೮ ರಿಂದ ೧೯೬೨ ವರೆಗೆ ಒಟ್ಟು ೩೬ ಸಂಪುಟಗಳು ಪ್ರಕಟವಾದವು. ೩೦,೦೦೦ ಕ್ಕೂ ಹೆಚ್ಚು ಪುಟಗಳು ಇದರಲ್ಲಿವೆ. ಈ ಅನುವಾದದ ವೈಶಿಷ್ಟ್ಯ ಹೀಗಿದೆ.

೧) ಮೊದಲಲ್ಲಿ ಇಡಿಯ ವೈದಿಕ ಸಾಹಿತ್ಯಕ್ಕೆ ಸಂಬಂಧಪಟ್ಟ ವಿಸ್ತಾರವಾದ ಪೀಠಿಕೆ. 
೨) ಸಾಯಣರ ಭಾಷ್ಯ ಭೂಮಿಕೆ
೩) ಮೂಲ ವೇದ ಮಂತ್ರ (ಸ್ವರಸಹಿತ)
೪) ಸಂಹಿತಾಪಾಠಕ್ಕೆ ಪದಪಾಠ
೫) ಮಂತ್ರಕ್ಕೆ ಸಾಯಣಭಾಷ್ಯ
೬) ಮಂತ್ರಗಳ ಪ್ರತಿಪದಾರ್ಥ
೭) ಮಂತ್ರಗಳ ಸಾಮಾನ್ಯ ತಾತ್ಪರ್ಯ
೮) ಸಂಗ್ರಹವಾದ ಆಂಗ್ಲಾನುವಾದ
೯) ವಿಶೇಷ ವಿಷಯಗಳು
೧೦) ಕೊನೆಯಲ್ಲಿ ವ್ಯಾಕರಣಾಂಶ

ಇಂತಹ ವಿಶಿಷ್ಟವಾದ ಕೆಲಸ ಕನ್ನಡದಲ್ಲೇ ಆಗಿರಲಿಲ್ಲ. ಬೇರೇ ಭಾರತೀಯಭಾಷೆಗಳಲ್ಲೂ ಇಂತಹ ಕೆಲಸ ನಡೆದಿಲ್ಲ. 

ಮಹಾರಾಜರು ಈ ಪುಸ್ತಕಗಳನ್ನು ಶಾಲೆಗಳಿಗೆ, ವೇದ ಪಾಠಶಾಲೆಗಳಿಗೆ, ವಿಶ್ವವಿದ್ಯಾಲಯಗಳಿಗೆ ದಾನವಾಗಿ ಕೊಟ್ಟರು. ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ, ಅಧ್ಯಾಪಕರಿಗೆ ರಿಯಾಯ್ತಿ ಬೆಲೆಯಲ್ಲಿ ಋಗ್ವೇದ ಸಂಪುಟಗಳು ದೊರೆಯುವಂತೆ ಅನುಕೂಲ ಮಾಡಿದರು.  ಹೀಗೆ ಅಭೂತಪೂರ್ವವಾದ ಕೊಡುಗೆಗಳಿಂದ ನಮ್ಮ ಮಹಾರಜರು ದಕ್ಷಿಣಭೋಜರೆಂದೇ ಪ್ರಖ್ಯಾತಿಯನ್ನು ಪಡೆದಿದ್ದಾರೆ. 
(ಸರ್ಕಾರದವರು ಪುನರ್ಮುದ್ರಣ ಮಾಡಿರುವ ಪುಸ್ತಕ)

                                              ॥ಚಿರಮಭಿವರ್ಧತಾಂ ಯದುಕುಲಸನ್ತಾನಶ್ರೀಃ ॥

Article by Srinidhi Ramachandra





No comments:

Post a Comment

Mysore — The Fairy Tale I Walked Into

M ysore — The Fairy Tale I Walked Into.                                  By Srinidhi Ramachandra   The morning sun glowed softly upon the fi...