Tuesday, 2 November 2021

ಸ್ವಾಮಿದೇವನೆ ಲೋಕಪಾಲನೆ

ರಚನೆ : ಸೋಸಲೆ ಅಯ್ಯಾ ಶಾಸ್ತ್ರೀ 

ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ|
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ ||1||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ|
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ ||2||

ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು|
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ ||3||

ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ|
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ ||4||

ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ|
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು ||5||

ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ|
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ ||6||

ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ|
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ
ದೀನಪಾಲನೆ ನಿನ್ನಧೀನದೊಳಿರ್ಪ ನಮ್ಮನು ಪಾಲಿಸೈ ||7||

ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ
ಭೂಮಿಯಲ್ಲಿಯು ಅಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ|
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ ||೮||

No comments:

Post a Comment

Mysore — The Fairy Tale I Walked Into

M ysore — The Fairy Tale I Walked Into.                                  By Srinidhi Ramachandra   The morning sun glowed softly upon the fi...